February 27, 2025

ಅವಳಂತರಂಗ

 ಅವಳಂತರಂಗ

ನೀನು ಹೆಣ್ಣು ದೊಡ್ಡವಳಾಗುತ್ತಿದ್ದೀಯಾ, ಹುಡುಗಾಟಗಳನ್ನೆಲ್ಲಾ ಬಿಟ್ಟು ಗಂಭೀರವಾಗಿರು ಎಂಬ ಗದರಿಕೆಗಳನ್ನು ಕೇಳಿಸಿಕೊಳ್ಳುವಾಗೆಲ್ಲಾ ಛೇ! ಹೆಣ್ಣಾಗಿ ಹುಟ್ಟಲೇಬಾರದಿತ್ತು ಅನ್ನಿಸುತ್ತಿತ್ತು. ಯಾವುದೋ ಹಬ್ಬ, ಕಾರ್ಯಕ್ರಮ, ಸಂಬಂಧಿಕರ ಮನೆಯ ಸಮಾರಂಭಕ್ಕೋ ಹೋಗಲೇಬೇಕೆಂದು ಆಸೆಯಿಂದಿರುವಾಗ ಮೂರುದಿನವೆಂದು ಮನೆಯಲ್ಲೇ ಕೂರುವಾಗ ಬೇಸರಕ್ಕೋ, ಮುಜುಗರದಿಂದಲೋ ಹೆಣ್ಣಾಗಿ ಹುಟ್ಟಿದ್ದಕ್ಕೆ ಇದೆಲ್ಲಾ ಅನುಭವಿಸಬೇಕೆಂದು ಅನಿಸಿದ್ದಿದೆ. ಶಾಲೆ-ಕಾಲೇಜುಗಳಿಗೆ ಒಬ್ಬಳೇ ಓಡಾಡುವಾಗ ಒಬ್ಬಳೇ ಓಡಾಡ ಬೇಡವೆಂದು ಎಲ್ಲರಿಂದಲೂ ಬೈಸಿಕೊಳ್ಳುವಾಗ ಅನ್ನಿಸುತ್ತಿತ್ತು ಏನಾಗಬೇಕೋ ಅದೇ ಹಣೆಯಲ್ಲಿ ಬರೆದಿದ್ದರೆ ತಪ್ಪಿಸಲಾಗುವುದಾ,  ಗಂಡಾದರೆ ತಲೆಬಿಸಿಯೇ ಇರುತ್ತಿರಲಿಲ್ಲ ಎಲ್ಲಿ, ಎಷ್ಟೊತ್ತಿನಲ್ಲಿ ಓಡಾಡಿದರೂ ಯಾವುದೇ ಕಟ್ಟುಪಾಡುಗಳೂ ಇರುತ್ತಿರಲಿಲ್ಲ, ಚಾಡಿ ಹೇಳುವವರ ಕಾಟವೂ ಇರುತ್ತಿರಲಿಲ್ಲ ಎಂದು. ಪ್ರತಿಯೊಬ್ಬ ಮಹಿಳೆಗೂ ಒಂದಲ್ಲಾ ಒಂದು ಸಂದರ್ಭದಲ್ಲಿ ಇಂತಹ ಸನ್ನಿವೇಶಗಳು ಎದುರಾಗಿರುತ್ತವೆ.

ಇದೆಲ್ಲವನ್ನೂ ಎದುರಿಸಿ ನನಗೇನಿಷ್ಟವೋ, ನನಗೇನು ಖುಷಿ ನೀಡುತ್ತದೆಯೋ ಅದರಂತೆ ನಡೆದುಕೊಂಡಿದ್ದೇನೆ. ಇದೇ ತರಹದ, ಇದಕ್ಕಿಂತಲೂ ಕ್ಲಿಷ್ಟಕರವಾದ ಸಂದರ್ಭಗಳನ್ನೂ ಎದುರಿಸಿ ಎಂತಹ ಸಂದರ್ಭಗಳಲ್ಲೂ ನನ್ನ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳಲು, ತೆಗೆದುಕೊಂಡು ನಿರ್ಧಾರಗಳನ್ನು ಸಮರ್ಥವಾಗಿ ಪೂರೈಸಲು ಸಶಕ್ತಳಾಗಿದ್ದೇನೆ. ಕೆಲಸಗಳ ವಿಷಯದಲ್ಲೂ ಕೇವಲ ಅಡಿಗೆ, ಮನೆ ಕೆಲಸಗಳಷ್ಟೇ ಅಲ್ಲದೇ ಬೇರೆ ಯಾವುದೇ ಕೆಲಸಗಳೂ ನನ್ನಿಂದಾಗುವುದಿಲ್ಲವೆಂದು ಕೈಚೆಲ್ಲುವುದಿಲ್ಲ. ಮಾಡುವ ಎಲ್ಲಾ ಕೆಲಸಗಳನ್ನೂ ಖುಷಿಯಿಂದ, ಪರಿಶ್ರಮದಿಂದ ಮಾಡುತ್ತೇನೆ. ಈಗ ನನ್ನ ಬಗ್ಗೆ ನನಗೇ ಖುಷಿಯಿದೆ ಹೆಣ್ಣಾಗಿ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಾ ಇರುವುದಕ್ಕೆ.

 ಬದುಕು ಕಲಿಸಿದ ದೊಡ್ಡ ಪಾಠವೆಂದರೆ ನಾಳೆಗಳ ಬಗ್ಗೆ ಹೆಚ್ಚು ನಿರೀಕ್ಷೆಗಳನ್ನು ಕಟ್ಟಿಕೊಳ್ಳಬಾರದು. ಇರುವ ಇಂದಿನ ದಿನದ ಪ್ರತೀ ಕ್ಷಣವನ್ನೂ ಖುಷಿಯಿಂದ ಅನುಭವಿಸಬೇಕು. ಮುಂದ್ ಯಾವತ್ತೋ ಆಗ ಹಾಗೆ ಬದುಕಬೇಕಿತ್ತು ಎಂದು ಕೊರಗಬಾರದಲ್ಲಾ? ನಮ್ ಖುಷಿ, ನೆಮ್ಮದಿ ಬೇರೆ ಯಾರನ್ನೂ ಅವಲಂಬಿಸಿರಬಾರದು. ಜೀವನದಲ್ಲಿ ಯಾವ ಸಂಬಂಧಗಳೂ ಶಾಶ್ವತವಲ್ಲ. ಒಂದಲ್ಲಾ ಒಂದು ಸಂದರ್ಭಗಳಲ್ಲಿ ಎಲ್ಲರೂ ದೂರವಾಗುವವರೇ. ಆದ್ದರಿಂದ ಎಲ್ಲಾ ಪರಿಸ್ಥಿಯನ್ನೂ ಎದುರಿಸಲು ಸಿದ್ಧರಾಗೇ ಇರಬೇಕು. ತಂದೆ, ಅಣ್ಣ-ತಮ್ಮ, ಗಂಡ, ಮಕ್ಕಳು ಇರುತ್ತಾರಲ್ಲಾ ಎಲ್ಲಾ ಅವರೇ ನಿರ್ವಹಿಸುತ್ತಾರೆ ಎಂದುಕೊಂಡು ಬದುಕಿದರೆ ಒಂದಲ್ಲಾ ಒಂದು ಸಂದರ್ಭದಲ್ಲಿ  ಕಣ್ಣು ಕಟ್ಟಿ ಕಾಡಿನಲ್ಲಿ ಕತ್ತಲಿನಲ್ಲಿ ಬಿಟ್ಟ ಪರಿಸ್ಥಿತಿಯಾಗುತ್ತದೆ. ಎಲ್ಲಾ ಸಂದರ್ಭಗಳನ್ನು ಎದುರಿಸುವುದಕ್ಕೆ ಮಾನಸಿಕವಾಗಿ ಸಿದ್ಧರಾಗೇ ಇರಬೇಕಾಗುತ್ತದೆ. ಆತ್ಮವಿಶ್ವಾಸ, ನಮ್ಮ ಮೇಲೆ ನಮಗೇ ನಂಬಿಕೆಯಿದ್ದರೆ ಎಲ್ಲವೂ ಸಾಧ್ಯ.

 ನೋಡಲು ಚಂದವಿಲ್ಲ, ದಪ್ಪ, ತೆಳ್ಳ, ಕಪ್ಪು, ಕುಳ್ಳ  ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂಬ ಇತರರ ಅಭಿಪ್ರಾಯಗಳಿಗೆ ಕಿವಿಗೊಟ್ಟು ಕೀಳರಿಮೆ ಬೆಳೆಸಿಕೊಂಡು ಮಾನಸಿಕವಾಗಿ ಕುಗ್ಗುತ್ತೇವೆ. ಆದರೆ ಅದೆಲ್ಲಾ ಇತರರ ಅಭಿಪ್ರಾಯಗಳಷ್ಟೇ, ಹೊಟ್ಟೆಕಿಚ್ಚಿಗೂ ಹೇಳಬಹುದು.  ಅವರ ಅಭಿಪ್ರಾಯಗಳನ್ನು ಗೌರವಿಸಿ ಅದನ್ನೇ ನಿಜವೆಂದುಕೊಳ್ಳುವವರು, ನಮಗೇ ನಾವು ಗೌರವ ಕೊಡದಿದ್ದರೆ ಹೇಗೆ?  'inner beauty lies in the face' ಎಂಬ ಮಾತೇ ಇದೆಯಲ್ಲಾ.

 #ಸೌಪಿ


No comments: