February 27, 2025

ನಮಗೆ ನಾವೇ ಗುರೂ..!!

 

ನಮಗೆ ನಾವೇ ಗುರೂ..!!

ಭೂಮಿಯಲ್ಲಿ ಬದುಕುವುದೆಷ್ಟು ದಿನವೋ, ಅದನ್ನು ನಿರ್ಧರಿಸುವವನು ದೇವರಷ್ಟೇ. ಆದರೂ ಇರುವಷ್ಟು ದಿನವೂ ಇನ್ಯಾರನ್ನೋ ಕುಹಕ, ವ್ಯಂಗ್ಯಗಳ ಮೂಲಕ, ದುಃಖದಲ್ಲಿದ್ದಾರೆಂದು ತಿಳಿದಿದ್ದರೂ  ನೋಯಿಸಿ ವಿಕೃತ ಆನಂದವನ್ನು ಅನುಭವಿಸುವವರಿದ್ದಾರೆ. ಕೆಲವರು ತಮ್ಮ ಮಾನಸಿಕ ಬಲದೊಂದಿಗೆ, ಅನಿವಾರ್ಯ ಸಂದರ್ಭದಲ್ಲಿ ಒಂಟಿಯಾಗಿ ಬದುಕುತ್ತಾರೆಂದರೆ ಅದಕ್ಕೂ ಹೊಟ್ಟೆಯುರಿ. ಅವರೆದುರಿನಲ್ಲೇ ಇನ್ಯಾರದೋ ಬಳಿ ಈ ಒಂಟಿಯಾಗಿರುವವರೆಲ್ಲಾ ಹೇಗೆ ಕಾಲಕಳೆಯುತ್ತಾರೋ, ಹೊಟ್ಟೆಗೆ ತುತ್ತಾದರೂ ಇಳಿಯುತ್ತದಾ, ನಾನಾದರಂತೂ ಇರುತ್ತಿರಲಿಲ್ಲ ಎಂದು ಮಾತಿನಲ್ಲೇ  ಚುಚ್ಚುವುದರಿಂದ ಏನು ಖುಷಿ ಸಿಗುವುದೋ ನನಗಂತೂ ಅರ್ಥವಾಗಿಲ್ಲ. ಇವರಿಗೂ ಅಂತಹ ಅನಿವಾರ್ಯ ಪರಿಸ್ಥಿತಿ ಎದುರಾದರೆ ಬದುಕಲೇಬೇಕು ದೇಹದಲ್ಲಿ ಉಸಿರಿರುವಷ್ಟು ದಿನ.

ಇನ್ನೂ ಕೆಲವರು ಒಬ್ಬರೇ ಬದುಕುವುದು ಕಷ್ಟವಪ್ಪಾ ಎಂಬ ಕನಿಕರದ ಮಾತುಗಳನ್ನಾಡಿ ಇರುವ ಆತ್ಮಸ್ಥೈರ್ಯವನ್ನೂ ಕುಗ್ಗಿಸಲು ಪ್ರಯತ್ನಿಸುತ್ತಾರೆ. ಜೀವನದಲ್ಲಿ ವಯಸ್ಸೇಷ್ಟೇ ಆದರೂ ಕಲಿಯುವುದು ಒಳ್ಳೆಯ ವಿಷಯಗಳನ್ನು ನಮಗಿಂತ ಚಿಕ್ಕವರಿಂದಲಾದರೂ ಕಲಿಯಬೇಕು ಅಂದುಕೊಳ್ಳುವುದೇ ಇಲ್ಲ. ವಿನಾ ಕಾರಣ ಅಹಂಕಾರ ಬಿಡಲೊಲ್ಲರು. ಅನಾರೋಗ್ಯವಿರುವವರು, ಇಳಿವಯಸ್ಸಿನಲ್ಲಿ ಒಂಟಿಯಾಗಿರುವವರೊಂದಿಗೆ ಆದಷ್ಟು ಸಕಾರಾತ್ಮಕ ಅಂಶಗಳನ್ನು ಹಂಚಿಕೊಂಡಾಗ, ಮಾನಸಿಕವಾಗಿ ಧೈರ್ಯ ಹೆಚ್ಚಿಸುವ ಮಾತುಗಳನ್ನಾಡಿದಾಗ ಅವರ ಆತ್ಮವಿಶ್ವಾಸವೂ ಇಮ್ಮಡಿಯಾಗುತ್ತದೆ. ಅದನ್ನು ಬಿಟ್ಟು ಅಯ್ಯೋ, ಪಾಪಾ ಜೀವನ ಕಷ್ಟ, ಒಂಟಿಯಾಗಿ ಬದುಕುವುದು ಕಷ್ಟ, ಆರೋಗ್ಯ ಇಲ್ಲದಿದ್ದರೆ ಕಷ್ಟವೆಂಬ ಕನಿಕರದ ಮಾತುಗಳನ್ನಾಡಿದರೆ ಅವರಲ್ಲಿರುವ ಅಲ್ಪ ಆತ್ಮಸ್ಥೈರ್ಯವೂ ಕುಗ್ಗುತ್ತದೆ. ಜನರೆಲ್ಲಾ ಹೇಳುವುದು ನಿಜವೆಂದೇ ನಂಬಿಬಿಡುತ್ತಾರೆ. ಸಾಧ್ಯವಾದಷ್ಟು ಆತ್ಮವಿಶ್ವಾಸವನ್ನು, ಸಕಾರಾತ್ಮಕ ವಿಷಯಗಳನ್ನು ಹಂಚುವ ಪ್ರಯತ್ನ ನನ್ನದು.  ಅದಕ್ಕೂ ಕೊಂಕು ತೆಗೆಯುವವರಿದ್ದಾರೆ. ಅವಳಿಗೇನು ಬಿಡು ಇತ್ಯಾದಿ..ಇತ್ಯಾದಿ.. ಅದರ ಬಗ್ಗೆ ಇನ್ಯಾವಾಗಲಾದರೂ ಬರೆಯುವೆ. ಆದರೂ ಯಾರಾದರೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದಾಗ ಇಷ್ಟೊಂದು ಬರೆಯುವುದಕ್ಕೆ ಪ್ರೇರಣೆ ಬಂದುಬಿಡುತ್ತದೆ.

#ಸೌಪಿ

No comments: