ಡಾ. ಸುಧಾಮೂರ್ತಿ ಅಲ್ಲ, ಸುಧಾ ಅಮ್ಮ!
ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಮಾತಿನಂತೆ, ಸರಳತೆ, ಮುಖದಲ್ಲಿ ಮಾಸದ ಸ್ವಚ್ಛ ನಗು, ಪರೋಪಕಾರದ ವ್ಯಕ್ತಿತ್ವದ ಬಗ್ಗೆ ಯೋಚಿಸಿದಾಗ ತತ್ಕ್ಷಣ ನೆನಪಾಗುವ ಹೆಸರೇ ಡಾ. ಸುಧಾಮೂರ್ತಿ. ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣಗಳನ್ನು ಪಡೆದ ಮಹಿಳೆ. ಸ್ವಲ್ಪ ಯಶಸ್ಸು, ಹೆಸರು ಪಡೆದ ತಕ್ಷಣ ಸೊಕ್ಕನ್ನು ತಲೆಗೇರಿಸಿಕೊಳ್ಳುವವರ ಮಧ್ಯೆ ಇಂತಹವರು ಅಪರೂಪವೇ. ನೂರಾರು ಸೋಲುಗಳನ್ನೂ ಸೋಲಿಸಿ, ಗೆಲುವಿನ ಹೆಜ್ಜೆಯೂರಿದ ಗಟ್ಟಿಗಿತ್ತಿ ಸುಧಾಮೂರ್ತಿಯವರ ಜೀವನ ಎಷ್ಟೋ ಜನರ ಪಾಲಿಗೆ ಸದಾ ಸ್ಫೂರ್ತಿಯ ಸೆಲೆ.
ಹೆಣ್ಣು ಮಗಳೊಬ್ಬಳು ಶಿಕ್ಷಣ ಪಡೆಯುವುದೇ ದುಸ್ತರವಾಗಿದ್ದ ಕಾಲದಲ್ಲಿ ಮನೆಯವರ ಒತ್ತಾಸೆಯಿಂದ ಇಂಜಿನಿಯರಿಂಗ್ ಶಿಕ್ಷಣ ಪಡೆದು, ಟೆಲ್ಕೋ ಕಂಪನಿಯಲ್ಲಿ ವೃತ್ತಿಯನ್ನು ಪ್ರಾರಂಭಿಸಿದರು. ದೇಶದ ಮೊದಲ ಇಂಜಿನೀಯರ್ ಮಹಿಳೆ ಎಂಬ ಹೆಗ್ಗಳಿಕೆಯೂ ಇವರಿಗಿದೆ.
ಬಾಯಲ್ಲಿ ಹೇಳುವ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ, ಜೀವನದಲ್ಲಿ ಅಳವಡಿಸಿಕೊಂಡವರೂ ವಿರಳವೇ. ಅವರದೇ ಮಾತುಗಳಲ್ಲಿ ಹೇಳುವುದಾದರೆ `ನಮ್ಮಲ್ಲಿ ಆಸ್ತಿ, ಹಣ ಎಷ್ಟೇ ಇದ್ದರೂ ಆತ್ಮವಿಶ್ವಾಸ ಮುಖ್ಯ. ಕೆಲವರು ತಮ್ಮಲ್ಲಿ ಒಳ್ಳೆಯ ಬಟ್ಟೆ, ಕಾರು, ಮನೆಯಿದ್ದರೆ ಅದನ್ನೇ ಆತ್ಮವಿಶ್ವಾಸ ಅಂದುಕೊಳ್ಳುತ್ತಾರೆ. ನಿಜವಾದ ಆತ್ಮವಿಶ್ವಾಸ ನಮ್ಮನ್ನು ನಾವು ನಂಬುವುದು. ನಮ್ಮ ಮಿತಿಗಳನ್ನು ಅರಿಯಬೇಕು. ಸುಖ-ದುಃಖ ಯಾವುದೇ ಇರಲಿ, ಇತರರನ್ನು ಅವಲಂಬಿಸಬಾರದು. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು' ಎನ್ನುವುದು ಅವರ ಅಭಿಪ್ರಾಯ.
ಅವರ ಸ್ಪೂರ್ತಿದಾಯಕ ಮಾತುಗಳು ಎಷ್ಟೋ ಜನರನ್ನು ಬದಲಾಯಿಸಿದೆ. ಜೀವನ ಹಳ್ಳ ಹಿಡಿದು ಕಮರಿ ಹೋಗುತ್ತಿರುವವರಿಗೆ ಹುಲ್ಲುಕಡ್ಡಿಯಂತೆ ಆಸರೆಯಾಗಿದೆ. ಜೀವನೋತ್ಸಾಹ ಕಳೆದುಕೊಂಡು, ನಿರಾಶೆಯ ಅಂಚನ್ನು ತಲುಪಿದವರೂ ಇವರ ಸ್ಪೂರ್ತಿದಾಯಕ ಮಾತುಗಳಿಂದ ಮತ್ತೆ ಆತ್ಮವಿಶ್ವಾಸದಿಂದ ಮೈಕೊಡವಿ ನಿಂತಿದ್ದಾರೆ. ಭೂಕಂಪ, ಅತಿವೃಷ್ಟಿ, ಕೊರೊನಾದಂತಹ ಸಂಕಷ್ಟದ ಸಂದರ್ಭಗಳಲ್ಲಿ ತಾವೇ ಸ್ವತಃ ಕೈಜೋಡಿಸಿದ್ದು ಇವರ ಸರಳತೆಗೆ ನಿದರ್ಶನ. ಈ ಕಾರಣಕ್ಕಾಗಿಯೇ ಅವರು, ಕರುನಾಡಿಗೆ ಬರಿಯ ಡಾ.ಸುಧಾಮೂರ್ತಿ ಅಲ್ಲ, ಸುಧಾ ಅಮ್ಮ!
- ಸೌಪರ್ಣಿಕಾ.
No comments:
Post a Comment