ಕೈಗಡಿಯಾರದ ಕತೆ
ಮೊದಲಿನಿಂದಲೂ ನನಗೆ ವಾಚ್ ಬಗ್ಗೆ ಹುಚ್ಚು ಜಾಸ್ತಿ. ದುಬಾರಿಯಲ್ಲದಿದ್ದರೂ ಅವುಗಳೆಲ್ಲದರೊಂದಿಗೆ ಸವಿನೆನಪುಗಳಿವೆ. ವಸ್ತುಗಳ ಮಟ್ಟಿಗೆ ಬೆಲೆ ಸಾಧ್ಯವಾದಷ್ಟೂ ಕಡಿಮೆಯದ್ದಾಗಿರಬೇಕು. ಅವುಗಳೇನೂ ಶಾಶ್ವತವಲ್ಲ, ಹಾಗಾಗಿ ದುಬಾರಿ ಬೆಲೆ ಕೊಟ್ಟು ಖರೀದಿಸುವುದು ವೃಥಾ ದಂಡ ಎನ್ನುವುದು ನನ್ನ ಭಾವನೆ.
ಕೀಲಿ ಕೊಡುವ ಕೈಗಡಿಯಾರವಿತ್ತು ಅಜ್ಜನದೊಂದು. ಅಜ್ಜ ತುಂಬಾ ಜೋಪಾನ ಮಾಡಿದ್ದು. ಅಜ್ಜನ ಅಗಲಿಕೆಯ ನಂತರ ಹಾಗೇ ಇತ್ತು. ಆ ನಂತರ ಹೈಸ್ಕೂಲ್ ಮೆಟ್ಟಿಲು ಹತ್ತಿದಾಗ ನನಗೆ ವಾಚ್ ಬೇಕೆಂದು ಹಠ ಹಿಡಿದಾಗ ಅದಕ್ಕೆ ಬೆಲ್ಟ್ ಹಾಕಿಸಿ ನನಗೆ ನೀಡಿದ್ದರು ತಂದೆಯವರು. ಕಟ್ಟಲು ಮನಸಾಗದಿದ್ದರೂ ಶಾಲೆಯ ಬ್ಯಾಗ್ಲ್ಲಿಟ್ಟುಕೊಂಡು ವೇಳೆ ನೋಡುವುದಾಗಿತ್ತು. ಅದು ಗಂಡಸರ ವಾಚ್ ಆಗಿದ್ದರಿಂದ ಛೇಡಿಸಿದರೆ ಅನ್ನುವದೇ ಕಾರಣ. ಈಗಾಗಿದ್ದರೆ ಫ್ಯಾಷನ್ ಆಗಿರುತ್ತಿತ್ತು. ಆ ನಂತರ ನನ್ನದು ಅಂತ ಮೊದಲ ವಾಚನ್ನು ಎಸ್ಎಸ್ಎಲ್ಸಿ ಪಬ್ಲಿಕ್ ಪರೀಕ್ಷೆಗೆ ಬೇಕೇ ಬೇಕು ಅಂದಿದ್ದಕ್ಕೆ ಜಾತ್ರೆಯಲ್ಲಿ ತೆಗೆದುಕೊಂಡಿದ್ದು ಅದೂ ಕೂಡ ಡಿಜಿಟಲ್ ವಾಚ್ ಆಗಿನ ಕಾಲದ್ದು. ಅದನ್ನೇ ತೀರಾ ಜೋಪಾನವಾಗಿಟ್ಟುಕೊಂಡಿದ್ದೆ. ಆ ನಂತರ 10 ನೇ ತರಗತಿಯನ್ನು ಮೊದಲನೇ ಶ್ರೇಣಿಯಲ್ಲಿ ತೇರ್ಗಡೆಯಾದರೆ ವಾಚ್ ಕೊಡಿಸುವೆನೆಂದು ಅಣ್ಣನ ಆಮಿಷವೂ ಇತ್ತು. ಎರಡು ವರ್ಷ ಕಾಡಿಬೇಡಿದ ಮೇಲೆಯೇ ಅಣ್ಣ ಕೊಡಿಸಿದ್ದು. ಅದು ಈಗಲೂ ಸುಸ್ಥಿತಿಯಲ್ಲಿದೆ. ಕಾಲೇಜಿನ ದಿನಗಳಲ್ಲಿ ಎಷ್ಟೋ ಸಲ ಮಳೆಯಲ್ಲಿ ನೆನೆದರೂ, ಕೈತಪ್ಪಿ ಬಿದ್ದರೂ, ಸುಮಾರು ಸಲ ಬಟ್ಟೆಯನ್ನು ತೊಳೆಯಲು ನೆನೆಸುವಾಗ ಅವುಗಳೊಂದಿಗೆ ವಾಚನ್ನೂ ನೆನೆಸಿದ್ದಿದ್ದರೂ ಈಗಲೂ ಸುಸ್ಥಿತಿಯಲ್ಲಿದೆ. ಟೈಟಾನ್ದು ಎಷ್ಟು ಅಂದಾಗ ಸಾವಿರ ಚಿಲ್ಲರೆ ಅಂದಾಗ ನನಗೆ ಬೇಡವಾಗಿತ್ತು ಅನ್ನಿಸಿಬಿಟ್ಟಿತ್ತು. ಈ ವಾಚ್ ಸುಂದರ ನೆನಪೂ ಹೌದು. ಮೊದಲು ತಂದಾಗ ಅದಕ್ಕೆ ಇದ್ದದ್ದು ಲೆದರ್ ಬೆಲ್ಟ್. ನನಗೆ ಬಂಗಾ,ದ ಬಣ್ಣದ ಬೆಲ್ಟ್ನ ವಾಚ್ನ ಕನಸು. ಅಂತೆಯೇ ಹಲವು ವರ್ಷದ ನಂತರ ಮೈಸೂರಿನಲ್ಲಿದ್ದಾಗ 300 ರೂ. ಕೊಟ್ಟು ನನ್ನಿಷ್ಟದ ಬಂಗಾರದ ಬಣ್ಣದ ಚೈನ್ ಬೆಲ್ಟ್ ಹಾಕಿಸಿದ್ದೆ.
ಈಗೆರಡು ಮೂರು ವರ್ಷಗಳ ಹಿಂದೆ ನನ್ನ ಪ್ರೀತಿಯ ಅಕ್ಕ ಕೊಟ್ಟ ವಾಚ್ ಒಂದನ್ನು ಎಷ್ಟೋ ಸಲ ಕಟ್ಟಿದ್ದೇನೆ.
ಹುಟ್ಟಿದ ದಿನಕ್ಕೆ ಉಡುಗೊರೆಯಾಗಿ ಕೊಟ್ಟಿದ್ದ ಇನ್ನೊಂದು ವಾಚ್ ನ್ನು 4-5 ತಿಂಗಳು ಕಟ್ಟಿದ್ದಷ್ಟೇ, ಪೇಟೆಗೆ ಹೋದಾಗ ಎಲ್ಲಿ ಬಿತ್ತೆಂದು ತಿಳಿಯದಂತೆ ಕಳೆದುಬಿಟ್ಟಿದ್ದೇನೆ. ಉಡುಗೊರೆಯಾಗಿ ನೀಡಿದ್ದನ್ನು ಕಳೆದುಬಿಟ್ಟೆನೆಂದು ಬೇಜಾರು ಈಗಲೂ ಕಾಡುತ್ತಿರುತ್ತದೆ. ಇನ್ನುಳಿದ 3 ವಾಚ್ ಗಳನ್ನು ನನಗೆ ಇಷ್ಟವಾಯಿತೆಂದು ಖರೀದಿಸಿದ್ದು. ಈಗ ಮೊನ್ನೆ ಮೊನ್ನೆ ಹೊಸತೊಂದು ಉಡುಗೊರೆಯಾಗಿ ಸಿಕ್ಕಿದೆ. ಅದನ್ನಾದರೂ ಕಳೆಯದಂತೆ ಜೋಪಾನ ಮಾಡಬೇಕು. ಇನ್ನೊಂದು ಅಪ್ಪನ ವಾಚ್, ಅಪ್ಪನ ನೆನಪಿಗಾಗಿ. ಹೀಗೆಯೇ ವಾಚ್ನ ಸರಣಿ ಮುಂದುವರಿಯುತ್ತದೆ.
ಎಷ್ಟಿದ್ದರೂ ಒಮ್ಮೆ ಕಟ್ಟಲಾಗುವುದು ಒಂದನ್ನು ಮಾತ್ರ ಎನ್ನುವುದು ವಾಸ್ತವ. ವಾಚ್ ಕೈಗಿದ್ದು ಅಭ್ಯಾಸವಾಗಿಬಿಟ್ಟರೆ, ಮನೆಯಿಂದ ಹೊರಟಾಗ ಎಂತಹುದೇ ಸಂದರ್ಭದಲ್ಲೂ ಕೈಗಡಿಯಾರ ಇಲ್ಲವೆಂದರೆ ಅಸಹಜವೆನಿಸುತ್ತದೆ. ಎಷ್ಟೇ ಡಿಜಿಟಲ್ ವಾಚ್, ಸ್ಮಾರ್ಟ್ ವಾಚ್ಗಳೆಲ್ಲಾ ಬಂದರೂ ಮೂರು ಮುಳ್ಳುಗಳಿರುವ, ಹನ್ನೆರಡು ಅಂಕೆಗಳಿರುವ ವಾಚ್ ಆಲ್ಟೈಮ್ ಫೇವರಿಟ್ ನನಗಂತೂ.
ಮೊದಮೊದಲು ಬಲಗೈಗೆ ವಾಚ್ ಕಟ್ಟಿದಾಗ ಅಮ್ಮನ ಬಳಿ ಸರಿಯಲ್ಲ, ಎಡಗೈಗೆ ಕಟ್ಟಿಕೊಳ್ಳೆಂದು ಬೈಸಿಕೊಂಡದ್ದೂ ಇದೆ. ಇನ್ನೂ ಕೆಲವರು ಹೇಳಿದ್ದೂ ಇದೆ ಬಲಗೈಗೇ ಏಕೆ ಎಡಗೈಗೆ ಕಟ್ಟಿಕೋ ಎಂದು. ಅದು ರೂಢಿಯಾಗಿದ್ದೂ ಕತೆಯೊಂದರ ಪ್ರೇರಣೆಯಿಂದ. ಶಾಲಾ ದಿನಗಳಲ್ಲಿ ಓದುತ್ತಿದ್ದ ಸುಧಾದಲ್ಲಿನ ಧಾರಾವಾಹಿಯೊಂದರ ಕಥಾನಾಯಕಿ ಬಲಗೈಗೇ ವಾಚ್ ಕಟ್ಟುತ್ತಿದ್ದಳು. ಆ ಪಾತ್ರ ನನಗೆ ತುಂಬಾ ಇಷ್ಟವಾಗಿತ್ತು. ಅವಳೂ ನನ್ನಂತೆಯೇ ಎಡಚಳಾಗಿದ್ದಳು ಎಂಬುದಕ್ಕೆ ವಿಶೇಷವಾಗಿ ಆ ಪಾತ್ರ ಹತ್ತಿರವಾಗಿತ್ತು. ನಂತರದ ದಿನಗಳಲ್ಲಿ ಮೊದಲು ವಾಚ್ ಕಟ್ಟುವಾಗ ಬಲಗೈಗೆ ಕಟ್ಟಿದ್ದೆ.ಈಗ ಅದೇ ಅಭ್ಯಾಸವಾಗಿಬಿಟ್ಟಿದೆ.
ಆದರೂ ಈಗೀಗ ಅರ್ಥವಾದ ಸತ್ಯ ಎಷ್ಟೇ ದುಬಾರಿ ವಾಚ್ ಇರಲಿ, ಕಡಿಮೆಯ ವಾಚ್ ಇರಲಿ ತೋರಿಸುವ ಸಮಯ ಮಾತ್ರ ಒಂದೇ, ಎಲ್ಲದಕ್ಕೂ ನಮ್ಮ ಸಮಯ ಸರಿಯಾಗಿರಬೇಕಷ್ಟೇ..!!
#ಸೌಪಿ