ಇತ್ತೀಚೆಗೆ ಪರಿಚಿತರ ಬಳಿ ಮಾತನಾಡುವಾಗ ವಿಷಯವೊಂದಕ್ಕೆ ಉತ್ತರವಾಗಿ ಅವರು ಹೇಳಿದ ಮಾತು ಮನಸ್ಸಿಗೆ ತುಂಬಾ ನಾಟಿತು. ಯಾವುದರಲ್ಲೂ ಸರಿಯಾಗಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ದಿನ ಬೆಳಗಾದರೆ ಮನೆಯ ಜವಾಬ್ದಾರಿ, ಕರ್ತವ್ಯಗಳನ್ನು ನಿಭಾಯಿಸುವುದರಲ್ಲೇ ದಿನ ಮುಗಿಯುತ್ತದೆ. ಮಧ್ಯದಲ್ಲಿ ಸಂಬಂಧಿಕರೋ ಇನ್ಯಾರೋ ಬರುತ್ತಾರೆ. ಅವರ ಆತಿಥ್ಯದ ಹೊಣೆಯೂ ನಮ್ಮ ಮೇಲೆಯೇ, ನಮಗಾಗಿ ಎಂದು ಮೀಸಲಿರಿಸಲು ಸಮಯವೆಲ್ಲಿರುತ್ತದೆ? ಹೆಣ್ಮಕ್ಕಳ ಜೀವನವೇ ಹೀಗೆ. ಹೆಣ್ಣು ಬಾಲ್ಯದಲ್ಲಿ ತಂದೆ, ಯೌವ್ವನದಲ್ಲಿ ಗಂಡ, ಮುಪ್ಪಿನಲ್ಲಿ ಮಗನ ಆಸರೆಯಲ್ಲಿ ಎಂಬುದೇ ಯಾವತ್ತಿಗೂ ಸತ್ಯ, ಮದುವೆಗೆ ಮೊದಲು ಅಪ್ಪನ ಮನೆ, ಮದುವೆಯ ನಂತರದಲ್ಲಿ ಗಂಡನ ಮನೆ, ಮುಪ್ಪಿನ ಕಾಲದಲ್ಲಿ ಮಗನ ಮನೆ ಹೀಗೇ ನಮಗೆ ಎಂದು ಒಂದು ಮನೆ ಇರುವುದೂ ಕನಸೆಂದರೂ ತಪ್ಪೇನಿಲಾಲ .
ಕಾಲ ಎಷ್ಟೇ ಮುಂದುವರಿದರೂ, ಹೆಣ್ಣು ಎಷ್ಟೇ ಸಬಲಳಾದರೂ, ಕುಟುಂಬವೆಂಬ ವ್ಯವಸ್ಥೆ, ಅದರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲೇಬೇಕಾಗುತ್ತದೆ. ಅದರಲ್ಲೂ ಮದುವೆ, ಮಕ್ಕಳು ಎಂಬ ಜವಾಬ್ದಾರಿ ಹೆಗಲೇರಿದ ಮೇಲೆ ಸಮಯ ದುರ್ಲಭವೇ. ಎಲ್ಲೋ ಬೆರಳೆಣಿಕೆಯಷ್ಟು ಜನ ಕೆಸುವಿನೆಲೆಯ ಮೇಲಿನ ನೀರಿನಂತೆ, ನಮಗೂ ಈ ಎಲ್ಲಾ ಜವಾಬ್ದಾರಿಗಳಿಗೂ ಸಂಬಂಧವೇ ಇಲ್ಲವೆಂದು ಬದುಕಬಹುದು. ಮದುವೆಯ ನಂತರ ಓದುತ್ತೇನೆಂದರೆ, ಮದುವೆಯಾಯಿತು ಇನ್ನೇನು ಎಂದು ಆಡಿಕೊಳ್ಳುವ ಬಾಯಿಗಳು. ಕುಟುಂಬದಿಂದ ಸ್ಪಂದನೆ, ಪ್ರೋತ್ಸಾಹ ಸಿಗುವುದು ಮರೀಚಿಕೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಹೊಸ ಆಲೋಚನೆಯನ್ನಿಟ್ಟುಕೊಂಡು ಏನನ್ನಾದರೂ ಸಾಧಿಸಬೇಕೆಂದುಕೊಂಡು ಶುರುವಿಟ್ಟರೆ ನಿನಗಿದೆಲ್ಲಾ ಬೇಕಾ, ಈಗೇನು ಕಡಿಮೆಯಾಗಿದೆ ಎಂದು ಇವೆಲ್ಲಾ ಪ್ರಯೋಗಗಳು, ನಮ್ಮ ಕುಟುಂಬದ ಗೌರವಕ್ಕೇ ಕುಂದು, ಎಲ್ಲರೂ ಆಡಿಕೊಂಡು ನಗುತ್ತಾರೆ ಎನ್ನುವ ಮಾತುಗಳೂ ಸಾಮಾನ್ಯ.
ಈಗಲೂ ಕೂಡ ಹೆಣ್ಣೆಂದರೆ ಈಡೀ ದಿನ ಅಡುಗೆ ಮನೆಗೆ, ಮನೆ ಕೆಲಸಗಳಿಗೆ ಸೀಮಿತವೆಂದುಕೊಂಡ ಸಂಕುಚಿತ ಮನಸ್ಥಿತಿಯವರಿದ್ದಾರೆ. ಮನೆಯ ಜವಾಬ್ದಾರಿಗಳನ್ನೆಲ್ಲಾ ಲೆಕ್ಕಾಚಾರ ಹಾಕಿ ನಿಭಾಯಿಸಿದರೂ, ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಅವಳ ಅಭಿಪ್ರಾಯವನ್ನು ಯಾರೂ ಕೇಳುವುದಿಲ್ಲ. ಅವಳಿಗೇನೂ ತಿಳಿಯುವುದಿಲ್ಲ ಎಂಬ ತಾತ್ಸಾರ. ಎಲ್ಲವನ್ನೂ ಸಹಿಸಿ ಸುಮ್ಮನ್ನಿದ್ದರೆ ಗೋಡೆಗಳ ನಡುವಿನಲ್ಲಿ ಆಯಸ್ಸು ಕಳೆಯುತ್ತದೆ. ಗಟ್ಟಿಯಾಗಿದ್ದು ವಿರೋಧಿಸಿ ಮಾತನಾಡಿದರೆ 'ಬಾಯಲ್ಲಿ ಜೋರು' ಎಂಬ ಹಣೆಪಟ್ಟಿ ಶಾಶ್ವತವಾಗಿ ಅಂಟಿಸಿಕೊಳ್ಳುವಂತಾಗುತ್ತದೆ.
ಈಗಿನ ದಿನಮಾನದಲ್ಲೂ ಜೀವನಪೂರ್ತಿ ಮದುವೆಯೇ ಬೇಡ, ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದೇನೆ, ಒಂಟಿಯಾಗಿಯೇ ಬದುಕುತ್ತೇನೆ ಎಂದು ಹೆಣ್ಣೊಬ್ಬಳು ನಿರ್ಧರಿಸಿದರೆ ಅದರ ಪರಿಣಾಮವನ್ನು ಅವಳಷ್ಟೇ ಅಲ್ಲದೇ ಇಡೀ ಕುಟುಂಬವೂ ಅನುಭವಿಸಬೇಕಾಗುತ್ತದೆ. ಸೌಂದರ್ಯದ ವಿಷಯಕ್ಕೆ ಬಂದರೂ ಬೆಳ್ಳಗೆ ಚಂದವಾಗಿ ಇರಬೇಕೆಂದು ಬಯಸುತ್ತಾರೆಯೇ ಹೊರತು, ಕಪ್ಪಗೆ, ದಪ್ಪಗೆ ಇದ್ದರೆ ಈಗಲೂ ಆಡಿಕೊಳ್ಳುವ ಬಾಯಿಗಳೇನೂ ಕಮ್ಮಿಯಾಗಿಲ್ಲ. ಹತ್ತು ವರ್ಷಗಳ ಹಿಂದಿದ್ದ ಸೌಂದರ್ಯ ಈಗಿರುವುದಿಲ್ಲ, ಆಂತರಿಕ ಸೌಂದರ್ಯ ಶಾಶ್ವತವೆಂದು ಅರ್ಥಮಾಡಿಕೊಳ್ಳುವ ಮನಸ್ಥಿತಿ ರೂಪುಗೊಳ್ಳುವುದು ಯಾವಾಗಲೋ?
ಕಾಲ ಎಷ್ಟೇ ಬದಲಾದರೂ ಗಂಡಾಗಬೇಕಿತ್ತು, ಎರಡೂ ಹೆಣ್ಣುಮಕ್ಕಳೇ ಎಂದು ಮೂಗು ಮುರಿಯುವವರಿಗೇನೂ ಕಮ್ಮಿಯಿಲ್ಲ. ಈಗೆಲ್ಲಾ ಹೆಣ್ಣು ಗಂಡೆಂಬ ಬೇಧವೇಕೆ ಎಂದರೆ ಅದನ್ನು ಒಪ್ಪಿಕೊಳ್ಳುವುದೂ ಅವರಿಗೆ ಕಷ್ಟ.
ಹೆಣ್ಣು ಮನಸ್ಸು ಮಾಡಿದರೆ ಸಾಧನೆಯೆಂಬ ಆಲದ ಮರವನ್ನೇ ಬೆಳೆಸಬಹುದು. ಆದರೆ ಅದಕ್ಕೆ ಕುಟುಂಬದ ಪ್ರೋತ್ಸಾಹ, ಸಹಕಾರ, ಆತ್ಮವಿಶ್ವಾಸ, ಭರವಸೆಯೆಂಬ ನೀರನ್ನೆರೆಯಬೇಕು. ಆಡಿಕೊಳ್ಳುವ ಬಾಯಿಗಳು ಅವುಗಳ ಕೆಲಸ ಮಾಡುತ್ತಿರಲಿ. ಅವುಗಳಿಂದಲೇ ಏನನ್ನಾದರೂ ಸಾಧಿಸಬೇಕೆಂಬ ಛಲ ಗಟ್ಟಿಯಾಗುವುದು. ಪ್ರತಿಯೊಬ್ಬರೂ ಮುಳ್ಳಿನ ಹಾದಿಯಲ್ಲಿ ನಡೆದ ಮೇಲೆಯೇ, ಹೂವಿನ ಹಾದಿ ತಲುಪಲು ಸಾಧ್ಯ.
#ಸೌಪಿ
No comments:
Post a Comment